ಕುರಿ ಕಾಯೊ ರಂಗನ ಕತೆ
- ಟಿ.ಎಸ್.ಗೊರವರ
ಕಾರಬಾರಿ ಮಲ್ಲಪ್ಪನ ಎರಿ ಹೊಲದಾಗ ಹಾಕಿದ್ದ ಕುರಿಗಾರ ಭೀಮಪ್ಪನ ಕುರಿ ಹಟ್ಟಿಯ ಸುತ್ತ ಕತ್ತಲು ಗಸ್ತು ಹೊರಟಿತ್ತು.
ಜರಿಯಾಗಿ ಸುರಿಯತೊಡಗಿದ್ದ ಕತ್ತಲೊಳಗೆ ಧ್ಯಾನಸ್ಥವಾಗಿ ಗಾಳಿ ಮೆಲ್ಲಗೆ ತನ್ನ ಸೆರಗು ಬೀಸತೊಡಗಿತ್ತು. ಆಗೊಂದು ಈಗೊಂದು ಮಿಂಚು, ಗುಡುಗು ಕಣ್ಣಗಲಿಸಿ ಕುರಿ ಹಟ್ಟಿಯ ನೋಡಿ ಕಣ್ತುಂಬಿಕೊಂಡು ಮಾಯವಾಗುತ್ತಿದ್ದವು. ಹಟ್ಟಿಯೊಳಗೆ ಕುರಿಗಳು ಮೆಲಕು ಹಾಕುತ್ತಾ ಅದೇನನ್ನೊ ಧ್ಯಾನಿಸುತ್ತಾ ಮಲಗಿದ್ದವು. ಹಟ್ಟಿಯೂ ಆ ಧ್ಯಾನದೊಳಗೆ ಮಗ್ನವಾದಂತೆ ತೋರತೊಡಗಿತ್ತು.
ಕ್ಷಣ ಹೊತ್ತು ಕಳೆದಿರಬಹುದು. ಬೆದೆ ಬಂದ ಕುರಿಯನ್ನು ಟಗರು ಬೆನ್ನು ಹತ್ತಿ ಹಟ್ಟಿಯ ತುಂಬಾ ಅಲೈ ಬುಲೈ ಆಡಿಸತೊಡಗಿತ್ತು. ಹಟ್ಟಿಗೆ ಜೀವ ಬಂದಂಗಾತು. ಕತ್ತಲೊಳಗೆ ಕುರಿ ಚಹರೆ ಸರಿಯಾಗಿ ತೋರದಿದ್ದರೂ ಎದೆಯಾಗಿನ ವಿರಹದುರಿಗೆ ಗಾಳಿ ಬೀಸಿದಂಗಾಗಿ ಅದು ಮತ್ತಷ್ಟು ಹೊತ್ತಿಕೊಂಡು ತಡೆದುಕೊಳ್ಳದ ಟಗರು ಕುರಿಗೆ ತುಟಿಮುತ್ತು ಕೊಡಲು ಹವಣಿಸತೊಡಗಿತ್ತು. ಕುರಿಯ ದುಬ್ಬದ ಮ್ಯಾಲೆ ಟಗರು ಕಾಲು ಹಾಕಿದಂತೆಲ್ಲಾ ಕುರಿ ತಪ್ಪಿಸಿಕೊಳ್ಳುವುದು ನಡದೇ ಇತ್ತು. ಇವೆರಡರ ಅಪ್ಪ, ಅವ್ವನ ಆಟದಿಂದಾಗಿ ಆದೆಷ್ಟೋ ದಿನದಿಂದ ಮಾತು ಕಳೆದುಕೊಂಡವನಿಗೆ ಮತ್ತೆ ಮಾತು ಮರುಕಳಿಸಿದ ಗೆಲವು ಹಟ್ಟಿಯೊಳಗೆ ಮೂಡತೊಡಗಿತ್ತು.
ಹಟ್ಟಿಯ ಸುತ್ತ ಕಾವಲು ಕಾಯಲು ಅಲ್ಲೊಬ್ಬರು ಇಲ್ಲೊಬ್ಬರು ಕುರಿ ಕಾಯುವ ಆಳುಗಳು ಮಲಗಿ ಗೊರಕೆ ತೆಗೆದಿದ್ದರು. ಕುರಿಗಳ ಗದ್ದಲದ ಬ್ಯಾ ಎನ್ನುವ ದನಿ ಆಳು ರಂಗನ ಕಿವಿಗಪ್ಪಳಿಸಿ ಬೆಚ್ಚಿಬಿದ್ದ. ತ್ವಾಳ ಬಂದಿರಬಹುದೆಂದು ಮನದಲ್ಲಿ ಎಣಿಕೆ ಹಾಕಿದ. ಗಾಳಿ ಸಣ್ಣಗೆ ಸೆರಗು ಬೀಸತೊಡಗಿದ್ದರೂ ಕುದಿಗೊಂಡ. ಕುರಿ ಮಾಲಕನ ಮೈ ತುಂಬಾ ಬಾಸುಂಡೆ ಏಳುವಂತೆ ಹೊಡೆಯುವ ಹೊಡೆತ, ಸೊಂಟದ ಕೆಳಗಿನ ಅವಾಚ್ಯ ಬೈಯ್ಗಳ ನೆಪ್ಪಾಗಿ ಮೈಯೆಲ್ಲಾ ಬೆವತು ನಡುಗತೊಡಗಿದ. ರಂಗನ ಕಣ್ಣೊಳಗಿನ ನಿದ್ದೆ ಆಗಲೇ ಮಾರು ದೂರ ಓಟಕಿತ್ತಿತ್ತು. ಕಂದೀಲ ಬುಡ್ಡಿಯನ್ನು ತುಸು ಎತ್ತರಿಸಿ ಹಟ್ಟಿಯೊಳಗೆ ಬೆಳಕು ಮಾಡಿ ಇಣುಕಿ ನೋಡಿದ. ರಂಗನ ನಿರೀಕ್ಷೆ ಹುಸಿಗೊಂಡಿತ್ತು. ಅವನ ಮುಖದ ಮ್ಯಾಲೆ ಹೊನ್ನಂಬರಿ ಹೂವಿನಂತ ನಗೆ ಅರಳಿ ಲಾಸ್ಯವಾಡಿತು. ತ್ವಾಳ ಬಂದಿರಬಹುದೆಂದು ಭಾವಿಸಿ ಭಯಗೊಂಡು ನಿದ್ದೆ ಕೊಡವಿಕೊಂಡು ಎದ್ದ ರಂಗನಿಗೆ ಹೋದ ಜೀವ ಬಂದಂಗಾಗಿ ನಿರಾಳವೆನಿಸಿ ಮತ್ತೆ ಕೌದಿಯೊಳಗೆ ತೂರಿಕೊಂಡು ಮೈ ಚಾಚಿದ.
ಮಲಗಿರುವ ರಂಗನಿಗೆ ಇನ್ನೂ ನಿದ್ದೆಯ ಜೊಂಪು ಹತ್ತಿರಲಿಲ್ಲ. ಮಳೆ ಹನಿ ಹನಿಯಾಗಿ ಒಂದೇ ಸಮನೆ ಹುಯ್ಯತೊಡಗಿತ್ತು. ಬಯಲನ್ನೇ ಮನೆ ಮಾಡಿಕೊಂಡಿದ್ದ ಕುರಿ ಆಳುಗಳ ಎದೆಯೊಳಗೆ ಕ್ಷಣ ಹೊತ್ತು ಆತಂಕ ಹೆಡೆಯಾಡಿತು. ಇದ್ದೊಂದ್ದು ಹಾಳಿ ಚೀಲವನ್ನು ತಲೆಯ ಮ್ಯಾಲೆ ಹೊದ್ದುಕೊಂಡು, ಅದರೊಳಗೆ ಗುಡಿಸಿಕೊಂಡು ಕುಳಿತರು. ಈಗ ಮನಸ್ಸು ನೆಮ್ಮದಿಯ ಉಸಿರು ಬಿಡತೊಡಗಿತ್ತು. ಮಳೆ ಮಾತ್ರ ಇದ್ಯಾವುದರ ಪರಿವೇ ಇಲ್ಲದೆ ಹಾಳಿ ಚೀಲದ ಮ್ಯಾಲೆ ಮನಸ್ಸಿಗೆ ಬಂದಂತೆ ಹುಯ್ಯತೊಡಗಿತು. ಹಟ್ಟಿಯೊಳಗೆ ಕುರಿಗಳು ಗುಂಪುಗೂಡಿ ಒಂದರ ಬುಡಕ್ಕೊಂದು ತಲೆ ತೂರಿ ಮಳೆಗೆ ಮೈಯೊಡ್ಡಿ ನಿಂತಿದ್ದವು.
ತಾಸು ಹೊತ್ತು ಬಿಟ್ಟು ಬಿಡದೆ ಜಡಿದ ಮಳೆ ದಣಿವಾರಿಸಿಕೊಳ್ಳಲು ತನ್ನ ಗುಡಿಸಲ ಕಡೆ ಪಾದವ ಬೆಳೆಸಿತು. ಮಳೆ ವರಪುಗೊಂಡಿದ್ದೆ ತಡ, ಕುರಿ ಆಳುಗಳು ಖುಷಿಗೊಂಡವು. ಬೆಳಕು ಹರಿಯಲು ಇನ್ನೂ ವ್ಯಾಳೆ ಬಾಳ ಇದ್ದುದರಿಂದ ಅವರ ಹಣೆಯ ಮ್ಯಾಲೆ ಚಿಂತೆಯ ಗೆರೆಗಳು ಮೂಡಲು ಸ್ಪರ್ಧೆಗಿಳಿದವು. ಕಣ್ಣೊಳಗೆ ನಿದ್ದೆ ಸುಳಿದಿರುಗಿ ಮಲಗಲು ಮನಸು ಹಟ ಹಿಡಿಯಿತು. ಮಲಗಬೇಕೆಂದರೆ ಎರಿ ಹೊಲದ ಮಣ್ಣು ರಜ್ಜಾಗಿ ಕಿತಿ ಕಿತಿ ಅನ್ನತೊಡಗಿತ್ತು. ಬೆಳಕು ಹರಿಯುವ ತನಕ ಕುಕ್ಕರಗಾಲಲ್ಲಿ ಕುಳಿತು ಕಾಲ ಕಳೆಯುವುದನ್ನು ನೆಪ್ಪಿಸಿಕೊಂಡು ದಿಗಿಲುಗೊಂಡರು. ಮಳೆಯಿಂದಾಗಿ ಥಂಡಿ ಗಾಳಿ ಬೀಸಿ ಬಂದು ಮೈ ಸವರಿ ನಡುಗಿಸತೊಡಗಿತು. ತಲಾ ಒಂದೊಂದು ಚಪ್ಪಡಿ ಬೀಡಿ ಸೇದಿ ಎದೆ ಬೆಚ್ಚಗೆ ಮಾಡಿಕೊಂಡು ಕುಳಿತ ಭಂಗಿಯಲ್ಲಿ ತೂಕಡಿಸತೊಡಗಿದರು.ದೀಡು ತಾಸು ಕಳೆದಿರಬಹುದು. ರಂಗ ತಲೆಯ ಮ್ಯಾಲೆ ಹೊದ್ದುಕೊಂಡಿದ್ದ ಹಾಳಿ ಚೀಲ ತೆಗೆದು ಆಕಾಶ ದಿಟ್ಟಿಸಿದ. ಮೈ ತುಂಬಾ ದೀಪದ ಅಂಗಿ ತೊಟ್ಟು ಸಿಂಗಾರಗೊಂಡಿದ್ದ ಬೆಳ್ಳಿ ಚಿಕ್ಕಿ ಮೂಡತೊಡಗಿತ್ತು. ತನ್ನ ದಿನಚರಿ ನೆಪ್ಪಾಗಿ ನಿದ್ದೆ ಕೊಸರಿದ.
ಅವತ್ತು ರಂಗನದು ದಿನಪೂರ್ತಿ ಹಟ್ಟಯೊಳಗೆ ಉಳಿಯುವ ಮರಿಗಳಿಗೆ ತಪ್ಪಲು ತರುವ ಪಾಳಿ ಇತ್ತು. ಅಂವ ಕೋತ, ಕೊಡಲಿ ತಗೊಂಡು ತಪ್ಪಲು ತರಲು ಹೆಜ್ಜೆ ಬೆಳೆಸಿದ. ಗೌಡರ ಹೊಲದ ಹತ್ತಿರ ಬಂದಾಗ ಒಳಗೊಳಗೆ ದಿಗಿಲು ಮಿಸುಗಾಡತೊಡಗಿತು."ಆಗ್ಲೆ ಬೆಳಕು ಹರಿಯಾಕತ್ತೈತಿ. ಇನ್ನೇನು ಗೌಡ್ರ ಹೊಲಕ್ಕ ಯಾರಾದ್ರೂ ಬಂದ್ರು ಬರಬಹುದು. ಅವ್ರು ಬರೋದ್ರೊಳ್ಗ ತಪ್ಪಲು ಕೊಯ್ಕೊಂಡು ಇಲ್ಲಿಂದ ಕಾಲ್ಕೀಳಬೇಕು. ತಪ್ಲ ಕೊಯ್ಯಾಗ ಏನರ ಸಿಕ್ಕ ಬಿದ್ರ ನನ್ನ ಚರ್ಮಾನ ಸುಲಿತಾರವ್ರು….’ ಎಂದು ರಂಗ ಮನಸೊಳಗೆ ಮಾತಾಡಿಕೊಂಡ.
ಬದುವಿನಲ್ಲಿ ಬೆಳೆದು ಹಚ್ಚಗೆ ನಗತೊಡಗಿದ್ದ ಬೇವಿನ ಗಿಡ, ಬನ್ನಿಗಿಡ, ಕರಿಜಾಲಿ, ಬಾರಿಗಿಡದ ತಪ್ಪಲನ್ನು ಅವಸರದಿಂದ ಕೊಯ್ದುಕೊಂಡು, ವಜ್ಜೆ ಹೊರೆಯನ್ನು ತಲೆ ಮ್ಯಾಲೆ ಹೊತ್ತು ಹಟ್ಟಿಯ ಕಡೆ ಮುಖ ಮಾಡಿದ.
ತಲೆ ಮ್ಯಾಲಿನ ತಪ್ಪಲದ ಹೊರೆ ಹೆಣ ಭಾರವಾಗಿ ಹಟ್ಟಿ ಅದ್ಯಾವಾಗ ಬಂದಿತೋ ಅನಿಸತೊಡಗಿತ್ತು. ಮುಂಜಾನೆಯ ಥಂಡಿಯಲ್ಲೂ ಗಂಟಲು ಒಣಗಿ ಉಗುಳು ಅಂಟಂಟಾಗಿ ಹಿಂಸೆಯಾಗತೊಡಗಿತ್ತು. ಮೈಯಲ್ಲಿ ಬೆವರಿನ ಉಟೆ ಕೀಳತೊಡಗಿತ್ತು. ಸಣ್ಣಗೆ ತಂಗಾಳಿ ಬೀಸಿ ಬಂದು ಮೈ ಸವರಿದಾಗ ಕೊಂಚ ನೆಮ್ಮದಿಯಾಗುತ್ತಿತ್ತು. ಕಾಲಿನ ಮೀನ ಖಂಡದೊಳಗೆ ನೋವು ಪತರುಗುಟ್ಟತೊಡಗಿತ್ತು. ಉಸುಕಿನ ಹೊಲದಲ್ಲಿ ದಪ್ಪನೆಯ ಕೊಡ್ಡ ಕೆರವು ಮೆಟ್ಟಿದ್ದ ರಂಗನ ಕಾಲುಗಳು ಪಾದವ ಎತ್ತಿ ಇಡಬೇಕಾದರೆ ನಡುಗಿ ಹೋಗುತ್ತಿದ್ದವು. ದೋತರದ ಕಚ್ಚಿ ಸಡಿಲಗೊಂಡಿದ್ದರಿಂದ ಅದೆಲ್ಲಿ ಬಿಚ್ಚುವುದೋ ಎಂದು ಆತಂಕವಾಗಿತ್ತು.
ಅನತಿ ದೂರದಲ್ಲಿ ಹಟ್ಟಿ ಗೋಚರಿಸತೊಡಗಿತು. ರಂಗನೊಳಗೆ ಇದ್ದಕ್ಕಿದ್ದಂತೆ ಉತ್ಸಾಹದ ಸೆಲೆಯೊಡೆಯಿತು. ತಲೆ ಮ್ಯಾಲಿನ ಹೊರೆಯನ್ನು ಹಟ್ಟಿಯ ಹತ್ತಿರ ರಭಸದಿಂದ ಒಗೆದ. ತಪ್ಪಲು ನೋಡಿದ ಕುರಿಗಳು ದೃಷ್ಟಿಯನ್ನು ಚೂಪುಗೊಳಿಸಿದವು. ತಲೆ ಮ್ಯಾಲಿನ ಯಮಭಾರ ಹಗುರಾದಂತಾಗಿ ರಂಗನಿಗೆ ನಿರಮ್ಮಳವೆನಿಸಿತು. ಕ್ಷಣ ಹೊತ್ತು ಕಾಲು ಚಾಚಿ ಹಟ್ಟಿಗೆ ಆತುಕೊಂಡು ಕುಳಿತ. ಮೈಯೊಳಗೆ ನಿಧಾನವೆನಿಸಿತು. ತಂಬಿಗೆ ನೀರು ಕುಡಿದ. ಎದೆಯೊಳಗೆ ಖುಷಿ ಕುಣಿದಂತಾಯಿತು.
ಜೊತೆಗಾರರು ಒಂದು ಅಳತೆಯ ಮೂರು ಕಲ್ಲನ್ನು ನೀಟಾಗಿ ಜೋಡಿಸಿ ಒಲೆ ಮಾಡಿ, ಅದರೊಳಗೆ ತೊಗರಿ ಕಟ್ಟಿಗೆ ಇಟ್ಟು ಉರಿ ಹಚ್ಚಿ ಜ್ವಾಳದ ಸಂಕಟಿ ಮಾಡಿ, ಕುರಿ ಹಾಲು ಕಾಸುತ್ತಿರುವುದನ್ನು ದಿಟ್ಟಿಸಿದ. ರಂಗನ ಹೊಟ್ಟೆ ಹಸಿದು ಕರಡಿ ಮಜಲು ಬಾರಿಸತೊಡಗಿತ್ತು. ತಲಾಗೊಂದೊಂದು ಪರಾತ ಅಗಲದ ತಾಟು ತಗೊಂಡು, ತಾಟಿನ ತುಂಬಾ ಸಂಕಟಿ ಹಾಲು ಹಾಕ್ಕೊಂಡು ಗಡದ್ದಾಗಿ ಉಂಡರು. ಮ್ಯಾಲೆ ಒಂದೊಂದು ತಾಟು ಹಾಲು ಕುಡಿದು ತೇಗು ಬಿಟ್ಟರು.
ಕುರಿ ಮೇಯಲು ಬಿಡುವ ಹೊತ್ತಾದ್ದರಿಂದ ರಂಗನ ಜೊತೆಗಾರರು ಹಟ್ಟಿಯ ತಡಿಕೆ ತೆಗೆದು ಕುರಿಗಳನ್ನು ಹೊರಗೆ ಬಿಟ್ಟರು. ಧೋತರವನ್ನು ಜೋಳಿಗೆಯಂತೆ ಮಾಡಿ ಅದರೊಳಗೆ ಬುತ್ತಿ ಇಟ್ಟುಕೊಂಡು, ಹೆಗಲಿಗೊಂದು ಕಂಬಳಿ ನೇತು ಹಾಕ್ಕೊಂಡು ಕುರಿ ಕಾಯಲು ಸಜ್ಜುಗೊಂಡು ಗುಡ್ಡದ ಕಡೆ ಹೊರಟರು.
*******
ದೂರದಲ್ಲಿ ಕೆರಗೆ ಹೋಗಿ ನೀರು ತಂದ ರಂಗ ಮರಿಗಳಿಗೆ ಕುಡಿಸಿ ಹಟ್ಟಿ ತಡಿಕೆಗೆ ತಪ್ಪಲು ನೇತು ಬಿಟ್ಟ. ತಪ್ಪಲು ತಿಂದ ಮರಿಗಳು ಹಟ್ಟಿಯೊಳಗೆ ಚಿನ್ನಾಟಿಗೆ ತೆಗೆದಿದ್ದವು. ಒಂದೊಂದು ಮರಿಗಳನ್ನು ಹಿಡಿದು ಅವುಗಳ ಮೈ ಮ್ಯಾಲೆ ಪೊದೆಯಾಗಿ ಬೆಳೆದ ಕೂದಲನ್ನು ಕತ್ತರಿಯಿಂದ ನೀಟಾಗಿ ಕತ್ತರಿಸತೊಡಗಿದ. ಕಿವಿಸಂದಿ, ತೊಡೆಸಂದಿಗಳಲ್ಲಿ ಸಂಸಾರ ಹೂಡಿದ್ದ ಉಣ್ಣೆಗಳನ್ನು ಕಿತ್ತು ಕಲ್ಲಿಗೆ ಒರೆಯುವ ಕಾಯಕ ನಡೆಸಿದ. ಒರೆದಾಗ ಉಣ್ಣೆಯ ಹೊಟ್ಟೆಯಿಂದ ಬರುವ ರಕ್ತದಿಂದ ಅಂವ ಕಲ್ಲ ಮ್ಯಾಲೆ ಎಳೆದ ಗೆರೆಗಳು ಬಿಸಿಲಿಗೆ ಒಣಗಿ ನವ್ಯ ಕಲಾಕೃತಿ ಹಾಂಗ ಗೋಚರಿಸತೊಡಗಿದ್ದವು.
ಮರಿಗಳ ಕರಾಪು ಮಾಡಿ ಅವುಗಳೊಗೆ ಉತ್ಸಾಹ ತುಂಬಿದ ರಂಗ ತಪ್ಪಲು ಆದಾಗೊಮ್ಮೆ ತಪ್ಪಲು ನೇತು ಬಿಡುತ್ತಾ, ನೀರು ಕುಡಿಸುತ್ತಾ ಅವುಗಳ ದೇಖರೇಖಿ ಮಾಡುವುದರೊಳಗೆ ಸಂಜೆಯ ಮುಗಿಲು ಉಣ್ಣೆಯ ರಕುತ ಬಳಿದುಕೊಂಡಿತ್ತು.ಇಡೀ ದಿನ ಉಲ್ಲಾಸದಿಂದ ಪ್ರತಿ ಕ್ಷಣಗಳನ್ನು ಮರಿಗಳ ದೇಖರೇಖಿಯಲ್ಲಿ ಕಳೆದ ರಂಗನಿಗೆ ಅದ್ಯಾಕೊ ಸುಸ್ತೆನಿಸತೊಡಗಿತ್ತು. ತಲೆಯೊಳಗೆ ಗುಡ್ಡದ ಕಲ್ಲು ಕುಂತಂಗಾಗಿ ಭಾರವೆನಿಸತೊಡಗಿತ್ತು. ಕೈ ಕಾಲುಗಳು ಸೋತಂತೆನಿಸಿ, ಬಾಯೊಳಗೆ ಉಪ್ಪುಪ್ಪು ನೀರು ಆಡತೊಡಗಿತು. ಮೈ ಮುಟ್ಟಿ ನೋಡಿಕೊಂಡ. ಅದು ಕಾದ ಹಂಚಾಗಿತ್ತು. ಮರಿಯೊಂದು ರಂಗನ ದುಬ್ಬದ ಮ್ಯಾಲೆ ಕಾಲು ಕೊಟ್ಟು ನಿಲ್ಲುವುದು, ಓಡುವುದು ಮಾಡತೊಡಗಿತ್ತು. ಕೆಂಡದ ಬಣ್ಣಕ್ಕೆ ತಿರುಗಿದ್ದ ಭಾರವಾದ ಕಣ್ಣುಗಳಿಂದ ಮರಿಯನ್ನು ದಿಟ್ಟಿಸಿ ಪ್ರೀತಿ ತೋರಿದ.
ಮೈಯೊಳಗೆ ಥಂಡಿ ಹೊಕ್ಕಂಗಾಗಿ ಮೈಯಂತ ಮೈಯೆಲ್ಲ ನಡುಗತೊಡಗಿತು. ಮೈತುಂಬಾ ಕೌದಿ ಹೊದ್ದ ಕುಳಿತ. ಕುರಿ ಮೇಸಲು ಹೋಗಿದ್ದ ಜೊತೆಗಾರರು ಕೌದಿ ಹೊದ್ದ ರಂಗನ ಅವತಾರ ನೋಡಿ ದಿಗಿಲುಗೊಂಡರು. ಇವನನ್ನು ಮನಿಗೆ ಕಳುಹಿಸಿ ಅಲ್ಲಿ ಡಾಕ್ಟರರಿಗೆ ತೋರಿಸಿದರಾಯಿತೆಂದು ಗೆಣಿಕೆ ಹಾಕಿ ಊರಿಗೆ ಕಳಿಸಲು ಜೊತೆಗಾರನೊಬ್ಬ ತಯಾರುಗೊಂಡ.ಕತ್ತಲು ಹೆಜ್ಜೆ ಹಾಕತೊಡಗಿದ್ದ ಕಳ್ಳಿದಾರಿ ಹಿಡಿದು ಇಬ್ಬರೂ ಊರ ಕಡೆ ಮುಖ ಮಾಡಿದರು. ರಂಗನ ಕಾಲುಗಳು ಕಸುವು ಕಳೆದುಕೊಂಡು ನಿತ್ರಾಣವೆನಿಸಿ ಸೋತಂತೆನಿಸತೊಡಗಿದ್ದವು. ದಾರಿಯಲ್ಲಿ ನಾಕೈದು ಸಲ ಕುಂತ. ತುಸು ಆರಾಮವೆನಿಸಿದಾಗ ಮತ್ತೆ ಪಾದ ಬೆಳೆಸಿದ. ತ್ರಾಸು ಮಾಡಿಕೊಂಡು ಊರು ತಲುಪಿದ. ರಂಗನ ಜೊತೆಗಾರನಿಗೆ ಹಟ್ಟಿಗೆ ಹೋಗಲು ಹೊತ್ತಾಗತೊಡಗಿದ್ದರಿಂದ ಅಂವ ರಂಗನನ್ನು ಊರು ಮುಟ್ಟಿಸಿ ಹಟ್ಟಿಗೆ ಹೊರಟು ಹೋದ.
ರಂಗ ಊರು ತಲುಪಿದಾಗ ಅದು ಕತ್ತಲ ಚಾದರ ಹೊದ್ದು ಕೊಂಡಿತ್ತು. ಅಲ್ಲೊಂದು ಇಲ್ಲೊಂದು ಮೆನಯಲ್ಲಿ ಬುಡ್ಡಿ ಚಿಮಣಿ ಪಿಳಿ ಪಿಳಿ ಕಣ್ಣು ಬಿಡತೊಡಗಿದ್ದವು. ಅದ್ಯಾರದೋ ಮನೆಯ ರೇಡಿಯೊದಲ್ಲಿ ರಾಜಕುಮಾರ ಹಾಡತೊಡಗಿದ್ದ. ಕುಡಿದ ವ್ಯಕ್ತಿಯೊಂದು ಜೋಲಿ ಹೊಡೆಯುತ್ತಾ, ಇಳಿಜಾರಿನಲ್ಲಿ ಬ್ರೇಕು ತಪ್ಪಿದ ಗಾಡಿಯಂತೆ ಬರತೊಡಗಿದ್ದ. ಹುಚ್ಚು ಹಿಡಿದ ಮುದುಕಿಯೊಂದು ತಿಪ್ಪೆಯ ನೆತ್ತಿಯ ಮ್ಯಾಲೆ ಕುಂತು ಅದೇನನ್ನೋ ಬಯ್ಯತೊಡಗಿತ್ತು. ರಂಗ ಹೊಸ ಲೋಕದೊಳಗೆ ಕಾಲಿಟ್ಟಂತೆ ಆ ಕಡೆ ಈ ಕಡೆ ದೃಷ್ಟಿ ಬೀರುತ್ತಾ ಮನೆ ತಲುಪಿದ.
ಮನೆಯಂದರೆ ಅದು ತೊಲೆಗಂಬದ ಮಡಿಗೆ ಮನೆಯಲ್ಲ. ಮ್ಯಾಲೆ ತಗಡು ಹೊದೆಸಿ ಸುತ್ತಲೂ ಗೋಡೆಯಂತೆ ನುಗ್ಗೆ ಕಟ್ಟಿಗೆಯ ತಡಿಕೆ ಹೆಣೆದು, ಅದಕ್ಕೆ ಸೆಗಣಿಯನ್ನು ಅಳಕು ಮಾಡಿ ಮೆತ್ತಿ, ಅದರ ಮ್ಯಾಲೆ ನೀಟಾಗಿ ಸುಣ್ಣ ಬಳೆದ ಮನೆಯದು.
ಒಳಗೆ ರಂಗನ ಅವ್ವ ದ್ಯಾಮವ್ವ ಒಲೆ ಊದುತ್ತಿರುವ ಸದ್ದು ಕೇಳಿಸತೊಡಗಿತ್ತು. ಹೊರಗಡೆ ಅದ್ಯಾರೊ ಮಾತಾಡುತ್ತಿರುವ ದನಿ ಕೇಳಿ ದ್ಯಾಮವ್ವ ಊದುಗೋಳಿ ಇಟ್ಟು ಎದ್ದು ಹೊರ ಬಂದಳು. ಕೌದಿ ಹೊದ್ದುಕೊಂಡಿರುವವನನ್ನು ನೋಡಿ ಭಯಗೊಂಡ ದ್ಯಾಮವ್ವ ಚಿಟ್ಟಿಕ್ಕು ಚೀರಿದಳು. ರಂಗ ಮೈ ಮ್ಯಾಲಿನ ಕೌದಿ ಸರಿಸಿ ಮುಖ ತೋರಿದ. ದ್ಯಾಮವ್ವನ ಎದೆಯಾಗ ಹೆದರಿಕೆಯ ಬಿರುಗಾಳಿ ಬೀಸಿದಂಗಾತು. ಮಗನಿಗೆ ಅದೇನಾಗಿದೆಯೊ ಎಂದು ಕಣ್ಣಲ್ಲಿ ನೀರು ತಂದುಕೊಂಡಳು. ಅವನ ಮೈ ಮುಟ್ಟಿ ನೋಡಿದಳು. ಎಳ್ಳು ಸಿಡಿಯುವಷ್ಟು ಬೆಚ್ಚಗಿತ್ತು. ದ್ಯಾಮವ್ವನಿಗೆ ಆತಂಕವಾಗಿ ದೊಡ್ಡ ಮಸೂತಿ ಹತ್ತಿರದ ಆರ್‌ಎಂಪಿ ಡಾಕ್ಟರ್ ಎಸ್.ಎಲ್.ಉಕ್ಕಿಸಲ ಅವರ ದವಾಖಾನಿಗೆ ತೋರಿಸಲು ಕರಕೊಂಡು ಹೋದಳು.
ಡಾಕ್ಟರು ರಂಗನನ್ನು ಚೆಕ್ಕು ಮಾಡಿ ಯಾಡು ಸೂಜಿ ಚುಚ್ಚಿ ಕ್ಷಣ ಹೊತ್ತು ಅಲ್ಲೇ ಮಲಗಿಸಿ ರೆಸ್ಟು ಮಾಡಲು ಹೇಳಿದರು. ದ್ಯಾಮವ್ವ ರಂಗನಿಗೆ ಒಂದೀಟು ತಡೆದು ಬರಲು ಹೇಳಿ, ತಾನು ಅಡಗಿ ಮಾಡುವುದಾಗಿ ಹೇಳಿ ಮನೆಗೆ ಬಂದಳು.
ಒಂದೀಟು ಹೊತ್ತಿನ ನಂತರ ಮೈ ಬಿಸಿ ಕಡಿಮೆ ಆದಂಗಾಗಿ ಆರಾಮೆನಿಸಿ ಡಾಕ್ಟರು ಕೊಟ್ಟ ಗುಳಿಗೆ ತಗೊಂಡು ಮನೆ ಕಡೆ ಹೆಜ್ಜೆ ಬೆಳೆಸಿದ.
ದವಾಖಾನಿಯಿಂದ ತಮ್ಮ ಮನೆಗೆ ಹೋಗುವ ದಾರಿ ಸಿಗದೆ ರಂಗ ಅಗಸಿವಾರಿ ಹತ್ತಿರದ ಹಾಲಿನ ಕೇಂದ್ರದ ಮುಂದೆ ಅತ್ತ ಇತ್ತ ನೋಡುತ್ತಾ ಜಾತ್ರೆಯೊಳಗೆ ಕಳೆದುಕೊಂಡ ಹುಡುಗನಂತೆ ಅಸಹಾಯಕನಾಗಿ ನಿಂತಿದ್ದ.
ಅದ್ಯಾರದೊ ಮನೆಗೆ ಪೇಸೆಂಟು ನೋಡಲು ಹೋಗಿದ್ದ ಡಾಕ್ಟರು ರಂಗನನ್ನು ನೋಡಿ ಸಿಟ್ಟಾಗಿ " ರೆಸ್ಟು ಮಾಡೋ ಮಾರಾಯ. ನೀನಿಲ್ಲೆ ನಿಂತು ಆಗಲೇ ಚೈನಿ ಹೊಡಿಯಾಕತ್ತಿ ಅಲ…’ ಎಂದರು.
ರಂಗನಿಗೆ ಏನು ಹೇಳಬೇಕೆನ್ನುವುದೇ ತಿಳಿಯಲಿಲ್ಲ. ನಿರ್ವಾ ಇಲ್ಲದೆ " ಸಾಹೆಬ್ರ, ನಮ್ಮ ಮನಿ ದಾರಿ ಯಾಕಡೆ ಅಂತ ಸ್ವಲ್ಪ ಹೇಳ್ರಿ. ನಾನು ಬಾಳ ದಿನ ಆತ್ರಿ, ಊರಿಗೆ ಬಂದೇ ಇಲ್ಲ. ಅದಕ್ಕ ನಮ್ಮನಿ ಯಾಕಡೆ ಅಂತ ಗೊತ್ತಾಗವಲ್ದು….’ ಎಂದ.
ರಂಗನ ಕಾಡುತನಕ್ಕೆ ಡಾಕ್ಟರು ಅಚ್ಚರಿಗೊಂಡರು. ಪಾಪ ಅನಿಸಿ ದಾರಿ ತೋರಿಸಿದರು. ಆ ಓಣಿಯ ದಾರಿ ಹಿಡಿದು ಮನೆಗೆ ಬಂದಾಗ ಅವರವ್ವ ಕರಸಿದ್ದಪ್ಪನ ಅಂಗಡಿಯಿಂದ ತಂದಿದ್ದ ಅಕ್ಕಿಯ ಬಿಸಿ ಅನ್ನ ಮಾಡಿ ಇಟ್ಟಿದ್ದಳು. ನಿತ್ಯ ಜ್ವಾಳದ ಸಂಕಟಿ ಉಣ್ಣುತ್ತಿದ್ದ ಅಂವ ಅನ್ನ ಉಂಡು ಅದೆಷ್ಟೋ ದಿನವಾಗಿತ್ತು. ಅವ್ವ ಬಡಿಸಿದ ಅನ್ನ, ತೊಗರಿ ಬ್ಯಾಳಿ ಸಾರು, ಅದ್ಯಾರದೊ ಮನೆಯಿಂದ ಇಸಕೊಂಡು ಬಂದಿದ್ದ ಹುಂಚಿ ಟಕ್ಕು ಸೀಪುತ್ತಾ ಊಟ ಮುಗಿಸಿ, ಗುಳಿಗೆ ತಗೊಂಡು ನಿದ್ದೆಗೆ ಜಾರಿದ.
********
ಮುಂಜಾನೆದ್ದು ರಂಗ ಅನತಿ ದೂರದ ತಿಪ್ಪೆಯಲ್ಲಿ ಉಚ್ಚೆ ಹೋದ. ಅವು ಹಳದಿ ಬಣ್ಣಕ್ಕೆ ತಿರುಗಿದ್ದವು. ರಂಗನಿಗೆ ಗಾಬರಿ ಅನಿಸಿತು. ಅದ್ಯಾವುದೋ ದೊಡ್ಡ ಜಡ್ಡು ಇದೆ ಎಂದು ಭಾವಿಸಿದ. ರಾತ್ರಿ ಡಾಕ್ಟರು ಹೇಳಿದ ಮಾತು ನೆಪ್ಪಾಗಿ ಇದು ಗುಳಿಗೆ ಮಹಿಮೆ ಎಂದುಕೊಂಡು ನಿರಮ್ಮಳನಾದ.
ಈಗ ತುಸು ಜ್ವರ ಕಡಿಮೆಯಾಗಿ ಮೈ ಹಗುರ ಅನಿಸತೊಡಗಿತ್ತು. ಮನಿ ಮುಂದೆ ಲೈಟಿನ ಕಂಬಕ್ಕಿಂತ ಎತ್ತರ ಬೆಳೆದು ನಿಂತಿದ್ದ ಬೇನಗಿಡದ ಕೊಂಗಲಿ ಮುರಕೊಂಡು ಹಲ್ಲು ತಿಕ್ಕಿದ. ಅವ್ವ ಕಾಸಿ ಕೊಟ್ಟ ಡಿಕಾಸಿ ಚಾ ಕುಡಿದ. ಬ್ಯಾರೆ ಕೆಲಸ ಇಲ್ಲದಂತಾಗಿ ಮನಿ ಕಟ್ಟಿ ಮ್ಯಾಲೆ ಕುಂತು ಆ ಕಡೆ ಈ ಕಡೆ ಹೋಗರ‍್ನ ಬರೋರ‍್ನ ಕಣ್ಣು ತುಂಬಿಕೊಂಡು, ಅವರ ಬಟ್ಟೆಬರೆ ದಿಟ್ಟಿಸಿ ವಿಸ್ಮಯಗೊಳ್ಳುತ್ತಾ ಕುಳಿತ.
ಕಾಲೇಜಿಗೆ ಹೊರಟಿದ್ದ ಹುಡುಗಿಯನ್ನು ದಿಟ್ಟಿಸಿದ. ಅದು ಚಿಕ್ಕವಳಿದ್ದಾಗಿ ಎತ್ತಿ ಆಡಿಸಿ, ಗಲ್ಲಕ್ಕೆ ಬೆಲ್ಲ ಕೊಡುತ್ತಿದ್ದ ಮಗ್ಗುಲ ಮನೆಯ ಮಂಜುಳಾ. ಆಕೆಯನ್ನು ನೋಡಿ ತುಸು ಹೊತ್ತು ಕಣ್ಣಿಗೆ ಚಕ್ರ ಬಂದಾಗಾತು. ಮೈ ಕೈ ತುಂಬಾ ಹರೆಯ ತುಂಬಿಕೊಂಡು, ನೀಟಾಗಿ ಬೈತಲೆ ತಕ್ಕೊಂಡು ಜೋಡು ಜಡೆ ಬಿಟ್ಟಿದ್ದ, ಕಡು ನೀಲಿ ಚೂಡಿದಾರ ಧರಿಸಿದ್ದ ಮಂಜುಳಾಳನ್ನು ಮತ್ತೆ ಮತ್ತೆ ನೋಡಬೇಕೆನಿಸಿತು.
ಮಾಮ ಎಂದು ಬೆನ್ನು ಬೀಳುತ್ತಿದ್ದ ಹುಡುಗಿ ಈಗ ಕ್ಯಾರೆ ಎನ್ನದೆ ಅಪರಿಚಿತಳಂತೆ ಹೋಗುತ್ತಿರುವುದನ್ನು ನೋಡಿ ಸೋಜಿಗವೆನಿಸಿತು. ಕುರಿ ಮೇಸಲು ಗುಡ್ಡಕ್ಕೆ ಹೋದಾಗ ಅಲ್ಲಿಗೆ ಕಟ್ಟಿಗೆಗೆ ಬರುತ್ತಿದ್ದ ದಾವಣಿ ಲಂಗದ ಲಂಬಾಣಿ ಹುಡುಗಿಯರನ್ನು ಮಾತ್ರ ನೋಡಿದ್ದ ರಂಗನಿಗೆ ಮಂಜುಳಾ ಜಾತ್ರೆಯಲ್ಲಿ ಆಡುತ್ತಿದ್ದ ನಾಟಕದ ಹುಡುಗಿಯಂತೆ ಮೋಹಕವಾಗಿ ತೋರಿದಳು.
ಅವಳ ಹಿಂದೆ ತಾನು ಬಸ್‌ಸ್ಟಾಂಡ್ ಕಡೆ ಹೋದ. ಅಲ್ಲಿ ಕಾಲೇಜಿಗೆ ಹೋರಡಲು ಜಮೆಯಾಗಿದ್ದ ಹುಡುಗ, ಹುಡುಗಿಯರ ದೊಡ್ಡ ಗುಂಪು ನೆರೆದಿತ್ತು. ರಂಗನಿಗೆ ತಾನು ಅದ್ಯಾವುದೋ ಮಾಯಕದ ಜಗತ್ತಿನೊಳಗೆ ಬಂದಿರುವ ಡೌಟು ಕಾಡಿತು. ಹುಡುಗಿಯರ ಗುಂಪು ದಿಟ್ಟಿಸಿದ. ಜಾತ್ರೆಯೊಳಗಿನ ತರಹೇವಾರಿ ಬಣ್ಣದ ಗೊಂಬೆಗಳಂತೆ ಕಂಡರು. ಬಣ್ಣ ಮೆತ್ತಿಕೊಂಡು ರಂಗುಗೊಂಡಿದ್ದ ಮೋಹಕ ತುಟಿ, ಅವರ ಕಣ್ಣೊಳಗಿನ ಬುಡ್ಡಿ ಚಿಮಣಿಯ ಬೆಳಕು, ಚೂಡಿದಾರದ ಎದೆಗೆ ಒದೆಯುತ್ತಿರುವ ಮೊಲೆ ರಂಗನೊಳಗೆ ಹಲಗೆ ಬಾರಿಸತೊಡಗಿದ್ದವು.
ರಂಗನ ಮಗ್ಗುಲ ನಿಂತಿದ್ದ ಕಾಲೇಜು ಹುಡುಗನೊಬ್ಬ ಮೊಬೈಲಿನ ವಿಡಿಯೋ ದಿಟ್ಟಿಸತೊಡಗಿದ್ದ. ರಂಗ ಅಚ್ಚರಿಗೊಂಡ. ಅವನೊಳಗೆ ಹುಚ್ಚಾಳಂಬೆಯಂತೆ ಪುದು ಪುದು ನೂರೆಂಟು ಪ್ರಶ್ನೆಗಳು ಎದ್ದವು. ಜೇಬಿನಲ್ಲಿಟ್ಟುಕೊಳ್ಳುವ ಟಿ.ವಿ. ಎಂದು ಭಾವಿಸಿ ಆ ಹುಡುಗನನ್ನು, ಮೊಬೈಲನ್ನು ಇನ್ನಿಲ್ಲದ ಕೂತುಹಲದಿಂದ ದಿಟ್ಟಿಸತೊಡಗಿದ.
ಕನ್ನಡ ಸಾಲೆಯ ಟೀಚರು ನಡಿಗೆಗೆ ಅವಸರ ತುಂಬಿ ರಂಗನ ಮುಂದೆ ಸುಳಿದು ಬಸ್ ಹತ್ತಲು ಹೋದರು. ಆ ಟೀಚರ್ ಮೈಯಿಂದ ಹೊರಟ ಸೇಂಟಿನ ಘಮ ರಂಗನ ಮೂಗಿನ ಹೊಳ್ಳೆ ಅರಳಿಸಿ ಸೋಜಿಗಗೊಂಡ. ಕುರಿ ಉಚ್ಚೆಯ ಗಬ್ಬು ನಾತಕ್ಕೆ ಒಗ್ಗಿ ಹೋಗಿದ್ದ ರಂಗ ಟೀಚರ್ ಮೈಯಿಂದ ಬಂದ ಘಮ ಅವರೊಳಗೆ ಅದ್ಹೇಗೆ ಬಂದಿರಬಹುದು ಎಂದು ಊಹಿಸಲು ಅಸಾಧ್ಯವೆನಿಸಿ ಮನೆಯ ದಾರಿ ತುಳಿದ.
******
ಊರಿಗೆ ಹೋಗಿ ಬಂದಾಗಿನಿಂದ ಕುರಿ ಕಾಯುವಾಗ ರಂಗನ ಮನಸು ಮೊದಲಿನಂತಿರದೆ ಅದ್ಯಾಕೊ ಒಳಗೊಳಗೆ ಭೋರಿಟ್ಟು ಅಳುತ್ತಿದೆ. ಮುಂಜಾನೆಯಾದರೆ ಸಾಕು. ಬಸ್‌ಸ್ಟ್ಯಾಂಡಿನ ಕಡೆ ಹೋಗಬೇಕೆನಿಸುತ್ತದೆ. ಬಣ್ಣದ ಗೊಂಬೆಯಂತ ಹುಡುಗಿಯರು, ಜೇಬಿನಲ್ಲಿಟ್ಟುಕೊಳ್ಳುವ ಟಿವಿ, ಟೀಚರ್ ಮೈ ಘಮ, ತಾನು ಗಲ್ಲಕ್ಕೆ ಬೆಲ್ಲ ಕೊಟ್ಟಿದ್ದ ಹುಡುಗಿ ಕನಸಾಗಿ ಕಾಡಿ ಜೀವ ಹಿಂಡತೊಡಗಿದ್ದವು.
*****
ಹಟ್ಟಿಯ ಸುತ್ತ ಕತ್ತಲು ಕಳ್ಳಬೆಕ್ಕಿನಂತೆ ಹೆಜ್ಜೆ ಇಡತೊಡಗಿತ್ತು. ರಂಗ ಮೈ ಮುಟ್ಟಿ ನೋಡಿಕೊಂಡ. ಜ್ವರ ಬಂದಂತೆನಿಸಿತು. ಖುಷಿಯಾಗಿ ಕೌದಿ ಹೊದ್ದು, ಕುರಿ ಮೇಸಲು ಹೋದ ಜೊತೆಗಾರರು ಬರುವ ದಾರಿ ನಿರುಕಿಸುತ್ತ ಕುಳಿತ.
No comments:
Post a Comment