Friday, February 5, 2010


ಎದೆ ಮಿಡಿತದ ಸದ್ದು
ನಾನು ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ. ಬದುಕಿನ ಹೊಸಿಲ ಒಳಗಡೆ ಇರುವಾಲೇ ನನ್ನ ಚೊಚ್ಚಲ ಕಥಾಸಂಕಲನ ಪ್ರಕಟಿಸಿ ನಿಮ್ಮ ಬೊಗಸೆಯಲ್ಲಿ ಇಡುತ್ತಿರುವುದಕ್ಕೆ ಖಷಿ ಆಗುತ್ತಿದೆ.
ನನಗೆ ಕತೆ ಬರೆಯುವುದೆಂದರೆ ಪ್ರಯಾಸದ ಕೆಲಸ. ಪದಜೋಡಣೆ ಮಾಡುವುದು ಗುಬ್ಬಿ ಹುಲ್ಲಿನ ದಳಗಳನ್ನು ಸೇರಿಸಿ ಗೂಡು ಕಟ್ಟುವ ಹಾಗೆ ತ್ರಾಸದಾಯಕ. ಬಳಸುವ ಪ್ರತಿ ಪದವೂ ಜೀವಂತಿಕೆಯಿಂದ ಉಸಿರಾಡಬೇಕು ಅನ್ನುವವನು ನಾನು. ನನ್ನ ವಾರಿಗೆಯ ಗಳೆಯರೆಲ್ಲಾ ಎಂಜಾಯ್ ಮಾಡುವುದರಲ್ಲಿ ತಲ್ಲೀನರಾಗಿದ್ದರೆ, ನಾನು ಪುಸ್ತಕದ ಪುಟಗಳಲ್ಲಿನ ತರಹೇವಾರಿ ಶಬ್ದಗಳ ಹುಡುಕುವ ಆಟದಲ್ಲಿ ಧ್ಯಾನಸ್ಧನಾಗಿರುತ್ತಿದ್ದೆ.ಗೆಳೆಯರು ಆಗಾಗ ಪ್ರಶ್ನೆ ಮಾಡುತ್ತಾರೆ. ನಿನಗೆ ಕತೆ ಬರೆಯಲು ಏನು ಪ್ರೇರಣೆ ಅಂತ. ನನಗೆ ಕತೆ ಬರೆಯಲು ಪ್ರೇರಣೆ ನೀಡಿದ್ದು ಅಪ್ಪ ಮತ್ತು ಅವ್ವ ಬಿಡುತ್ತಿದ್ದ ನಿಟ್ಟುಸಿರ ಮಾತುಗಳು. ಪ್ರತಿ ರಾತ್ರಿ ಊಟ ಮಾಡುವ ಹೊತ್ತಿಗೆ ಅಪ್ಪ, ತಾನು ಅದೆಷ್ಟೊಂದು ದುಡಿದರೂ ಇನ್ನೂ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿರುವ ಬಡತನ ಸಾಲದ ಭಾದೆಯನ್ನು ಕಣ್ಣಲ್ಲಿ ನೀರು ಜಿನುಗುವಂತೆ ಕತೆಯಂತೆ ಹೇಳುತ್ತಿದ್ದ. ಆತನ ಎಲ್ಲ ಮಾತುಗಳು ನೋವಿನ ಮಳೆಯಲ್ಲಿ ತೊಯ್ದಿರುತ್ತಿದ್ದರೂ, ಆತನ ಬತ್ತದ ಜೀವನೋತ್ಸಾಹ ನನ್ನಲ್ಲಿ ಅಚ್ಚರಿ ಮೂಡಿಸುತ್ತಿತ್ತು. ಅವ್ವನೂ ಕೂಡ ಅದ್ಯಾವತ್ತು ಚಂದಿರನನ್ನು ತೋರಿಸಿ, ಹಾಡು ಹೇಳಿ ನನ್ನನ್ನು ರಮಿಸಲಿಲ್ಲ. ನಾನು ಹಿರಿಯ ಮಗನಾದ್ದರಿಂದ ತನ್ನೆಲ್ಲ ಅವಮಾನಗಳನ್ನು ಕತಾನಾಯಕಿಯ ಸ್ವಗತದಂತೆ ಹೇಳುತ್ತಿದ್ದಳು. ಇವು ನನಗೆ ಕತೆ ಕಟ್ಟುವ ಕಲೆಗೆ ಪ್ರೇರಣೆ ನೀಡಿವೆ ಅಂತ ಅನಿಸುತ್ತಿದೆ.
ಹಳ್ಳಿ ಬದುಕಿನ ನೈಜ ಚಿತ್ರಣಗಳನ್ನು, ಹಳ್ಳಿಯಲ್ಲಿ ಹೆಜ್ಜೆ ಇಟ್ಟಿರುವ ಜಾಗತೀಕರಣದ ವಿರೂಪತೆಯನ್ನು, ನನ್ನೆದೆಯ ತವಕ, ತಲ್ಲಣಗಳನ್ನು ಕತೆಯಾಗಿಸುವ ಅದಮ್ಯ ತುಡಿತದೊಂದಿಗೆ ಕತೆ ಬರೆಯುತ್ತಿದ್ದೇನೆ. ನನ್ನೆಲ್ಲ ಕತೆಗಳನ್ನು ನಿಮ್ಮೆದುರಿಗೆ ಹರವಿದ್ದೇನೆ. ಸಹೃದಯಿಗಳಾದ ತಾವು ಓದಿ ಪ್ರತಿಕ್ರಿಯಿಸುತ್ತೀರೆಂದು ಭಾವಿಸಿದ್ದೇನೆ.
-ಟಿ.ಎಸ್. ಗೊರವರ

No comments:

Post a Comment